SHARE

ಬೆಳಗಾವಿ:50 ವರ್ಷಗಳಷ್ಟು ಹಳೆಯದಾದ ಇಲ್ಲಿನ ಸೇಂಟ್ ಜೋಸೆಫ್ ಕನ್ನಡ ಶಾಲೆಯನ್ನು ಮುಚ್ಚುವ ಹುನ್ನಾರಕ್ಕೆ ಹಿನ್ನಡೆಯಾಗಿದ್ದು, ಕನ್ನಡಿಗರ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ. 1967 ರಲ್ಲಿ ಆರಂಭಗೊಂಡು ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಬೆಳಗಾವಿಯ ಸೇಂಟ್ ಜೊಸೆಫ್ ‘ಅಂಗ್ರೇಜಿ’ ಶಾಲೆಯ ಕನ್ನಡ ಮಾಧ್ಯಮವನ್ನು ಮುಚ್ಚಲು ನಡೆಸಿದ ಕೀಟಳೆ ವಿರುದ್ಧ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಕರವೇ ಹಾಗೂ ಇತರ ಕನ್ನಡ ಮುಖಂಡರು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಲಭಿಸಿದೆ.

ಗಡಿ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ, ಶಿಕ್ಷಣ ಸಚಿವ ತನ್ವೀರ ಸೇಠ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಮಾಡಿದ ಮನವಿ fruitful ಆಗಿದೆ ಎಂದು ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಸಂತಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಹಾಗೂ ಡಿಡಿಪಿಐ ಅವರಿಗೆ ಆದೇಶ ನೀಡಿ ಕನ್ನಡ ಶಾಲೆ ಮುಚ್ಚದಂತೆ ನೋಡಿಕೊಳ್ಳಲು ಸರಕಾರ ತಿಳಿಸಿತ್ತು. ಸಂಸ್ಥೆಯ ಮಾನ್ಯತೆ ರದ್ದುಗೊಳಿಸುವ ಕಠಿಣ ಎಚ್ಚರಿಕೆಯನ್ನೂ ಸರಕಾರ ನೀಡಿತ್ತು.

ಸರಕಾರದ ಆದೇಶದ ಹಿನ್ನೆಲೆಯಲ್ಲಿ ಬೆಳಗಾವಿ ಬಿಇಓ ಕಳೆದ ಸೋಮವಾರ ದಿ.17 ರಂದು ಶಾಲೆಗೆ ಆದೇಶ ಕಳಿಸಿ ಕನ್ನಡ ಮಾಧ್ಯಮ ಪ್ರವೇಶ ಆರಂಭಿಸಲು ಸಹ ತಿಳಿಸಿದ್ದರು. ಶುಕ್ರವಾರ ಶಾಲೆಯ ಸೂಚನಾ ಫಲಕದ ಮೇಲೆ ಪ್ರವೇಶ ಪುನರಾರಂಭಿಸಿದ ಬಗ್ಗೆ ಪ್ರಕಟಣೆ ಅಂಟಿಸಲಾಗಿದೆ. ಪಾಲಕರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಶಿಕ್ಷಣ ಸಚಿವರಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಹಾಗೂ ಜಿಲ್ಲಾಧಿಕಾರಿ ಎನ್. ಜಯರಾಮ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.