SHARE

ಬೆಳಗಾವಿ:ಹಿರಿಯ ಮುತ್ಸದ್ಧಿ ರಾಜಕಾರಣಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲಗೈ ಬಂಟ ಸತೀಶ ಜಾರಕಿಹೊಳಿ ಅವರು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿಯೊಂದಿಗೆ ಸಂಭಾಷಣೆಯಲ್ಲಿ ಭಾಗಿಯಾಗಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.ಕಾಂಗ್ರೆಸ್ ನ ಹಿರಿಯ ಮುಖಂಡ ಸತೀಶ ಜಾರಕಿಹೊಳಿ ಸಚಿವ ಪದವಿ ಕಳೆದುಕೊಂಡ ಮೇಲೆ ತಮ್ಮ ನಾಯಕ ಸಿದ್ಧರಾಮಯ್ಯ ಅವರೊಂದಿಗೆ ಮುನಿಸಿಕೊಂಡ ಬಗ್ಗೆ ಚರ್ಚೆಗಳು ಕಳೆದ ಒಂದು ವರ್ಷದಿಂದಲೇ ಗರಿಗೆದರಿದ್ದವು.

ಸತೀಶ ಜಾರಕಿಹೊಳಿ ಕಾಂಗ್ರೆಸ್ ತೊರೆಯುತ್ತಾರಂತೆ, ರಾಯಚೂರಿನಿಂದ ಸ್ಪರ್ಧಿಸುತ್ತಾರಂತೆ ಎಂಬಿತ್ಯಾದಿ ಚರ್ಚೆಗಳ ಮಧ್ಯೆ ಇಂದು ಸಂಜೆ ರಾಯಚೂರು ಪ್ರವಾಸಿ ಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ಆರಾಮವಾಗಿ ಕುಳಿತು ಚಹಾ ಸೇವಿಸುತ್ತ ಸಂಭಾಷಣೆಯಲ್ಲಿ ತೊಡಗಿದ್ದು ವಿಧಾನಸಭಾ ಚುನಾವಣಾ ಮುಂಚೆ ಜೆಡಿಎಸ್ ಸೇರಿಕೊಳ್ಳುವುದು ಖಚಿತವೆಂದು ಹೇಳಲಾಗುತ್ತದೆ.

ಉತ್ತರ ಕರ್ನಾಡಕದ ಪ್ರಭಾವಿ ರಾಜಕಾರಣಿಯಾಗಿ ಹಾಗೂ ಸಿದ್ಧರಾಮಯ್ಯ ಬಲಗೈ ಆಗಿದ್ದ ಸತೀಶ ಅವರ ಬಗ್ಗೆ ಸಿಎಂ ಉದಾಸೀನ ತೋರಿದರೆಂಬ ಬಗ್ಗೆ ಮಾಧ್ಯಮಗಳ, ಜನಮಾಸದಲ್ಲಿ ಚರ್ಚೆ ನಡೆಯುತ್ತಲೇ ಇತ್ತು. ರಾಯಚೂರಿನಿಂದ ಸ್ಪರ್ಧಿಸಲಾರೆ ಕಾಂಗ್ರೆಸ್ ನಲ್ಲೇ ಇದ್ದು ಯಮಕನಮರಡಿಯಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಇಂದಿನ ನಡೆ ತೀವೃ ಕುತೂಹಲ ಕೆರಳಿಸಿದ್ದು, ರಾಜಕೀಯ ಏರುಪೇರು ಸೃಷ್ಟಿಸುವ ಸಾಧ್ಯತೆ ಇದೆ. ಜೆಡಿಎಸ್ ಪಕ್ಷಕ್ಕೆ ಬೆಳಗಾವಿ ಮತ್ತು ಉತ್ತರ ಕರ್ನಾಟಕದಲ್ಲಿ ಅಕೌಂಟ್ ತೆರೆಯುವಲ್ಲಿ ಸತೀಶ ಜಾರಕಿಹೊಳಿ ಅವರು ಪಾತ್ರವಹಿಸುವುದು ಬೆಳವಣಿಗೆಗಳಿಂದ ಖಚಿತವಾಗುತ್ತಿದೆ. ವಿಧಾನಸಭೆ ಚುನಾವಣೆಗೆ ಇನ್ನೇನು ವರ್ಷದ ಅವಧಿಯೂ ಇಲ್ಲ. ಸತೀಶ ಜಾರಕಿಹೊಳಿ ಮುನಿಸು ಕಾಂಗ್ರೆಸ್ ಗೆ ದೊಡ್ಡ ತಲೆನೋವಾಗಿದ್ದು, ಜೆಡಿಎಸ್ ಗೆ ಲಾಭವಾಗಲಿದೆ.