SHARE

ಬೆಳಗಾವಿ:ಬೆಳಗಾವಿ ಜಿಲ್ಲೆಯ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಂತರಂಗದಲ್ಲಿ ಧೂಳೆದ್ದಿದ್ದು ಒಳಗೊಳಗೆ ಅಸಹನೆಯ ಬೇಗುದಿ ಕುದಿಯುತ್ತಿದೆ.ಇಂದು ಕ್ಯಾಂಪ್ ಪ್ರದೇಶದ ಡಾವರ್ ಬಂಗ್ಲೆಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಒಳಗೆ ಮತ್ತು ಹೊರಗೆ ನಾಯಕರ ನಡುವೆಯೇ ತಿಕ್ಕಾಟದ ಪ್ರಸಂಗಗಳು ನಡೆದ ಬೆನ್ನಿಗೆ ಇನ್ನೊಂದು ಪ್ರಮುಖ ರಾಷ್ಟ್ರೀಯ ಪಕ್ಷ  ‘ಕಾಂಗ್ರೆಸ್ ಮನೆಯ ದೋಸೆಯೂ ತೂತಾಗಿಯೇ ಇದೆ’.ಬಿಜೆಪಿಗಿಂತ ಒಂದು ಹೆಜ್ಜೆ ಮುಂದು ಎನ್ನುವಷ್ಠರ ಮಟ್ಟಿಗೆ ಒಳಗಡೆಯೇ ಬಣ ರಾಜಕೀಯ ಬೇಗುದಿಯ ಪರಾಕಾಷ್ಠೇ ಬಹಿರಂಗಗೊಂಡಿದೆ.

ಕಾಂಗ್ರೆಸ್ ನಾಯಕರಲ್ಲೂ ಎರಡು ಬಣಗಳಾಗಿದ್ದು ಈಗಾಗಲೇ ಒಂದು ಬಣ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧವೇ ಪಕ್ಷ ಸಂಘಟನೆ ಮತ್ತು ನಿರ್ವಹಣೆಯಲ್ಲಿ ವಿಫಲ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ಕೆ. ಸಿ. ವೇಣುಗೋಪಾಲ ಅವರಿಗೆ ಸಹಿ ಸಂಗ್ರಹಿತ ದೂರು ಪತ್ರ ಸಲ್ಲಿಸಿದ್ದು ಬಹಿರಂಗವಾಗಿದೆ. ಇದರ ಬೆನ್ನಿಗೆ ಒಟ್ಟಾರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಬೆಳವಣಿಗೆ, ಆಗುಹೋಗುಗಳ ಬಗ್ಗೆ ಅವಲೋಕನ ವರದಿ ಸಲ್ಲಿಸಲು ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಕ್ಕನ್ನ ಸವಸುದ್ದಿ ನೇತೃತ್ವದ *ನ್ಯೂಟ್ರಲ್* ಮೂರನೇ ಬಣ ತನ್ನ ಕಾರ್ಯಕರ್ತರು, ಪದಾಧಿಕಾರಿಗಳೊಂದಿಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ.

ಮೂಲಗಳ ಪ್ರಕಾರ ಜಿಲ್ಲೆಯ ಕಾಂಗ್ರೆಸ್ ರಾಜಕಾರಣದಲ್ಲಿ ಹಿರಿಯ, ಮುತ್ಸದ್ಧಿ ರಾಜಕಾರಣಿ ಎಂದೇ ಗುರುತಿಸಲ್ಪಟ್ಟ ಮಾಜಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಹಾಲಿ ಸಚಿವ ಹಿರಿಯ ಸಹೋದರ ರಮೇಶ ಜಾರಕಿಹೊಳಿ ನಡುವಿನ ರಾಜಕೀಯ ಮುಸುಕಿನ ಗುದ್ದಾಟ ಎಂದು ವಿಷ್ಲೇಶಿಸಲಾಗುತ್ತಿದೆ.ಮೇಲ್ನೋಟಕ್ಕೆ ಸಚಿವ ರಮೇಶ ಜಾರಕಿಹೊಳಿ, ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮತ್ತಿತರರು ತಮ್ಮ ಬೆಂಬಲಿಗ ಪದಾಧಿಕಾರಿಗಳು, ಕಾರ್ಯಕರ್ತರ ಬಳಗದೊಂದಿಗಿದ್ದರೆ, ಅತ್ತ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಶಾಸಕ ಫಿರೋಜ್ ಸೇಠ್,  ಅಶೋಕ ಪಟ್ಟಣ, ಗಣೇಶ ಹುಕ್ಕೇರಿ ಸೇರಿದಂತೆ ಇತರ ನಾಯಕರ ದಂಡು ಎರಡು ಇಬ್ಭಾಗ ಗೋಚರಿಸುವಂತೆ ನಡವಳಿಕೆ ಪರಸ್ಪರ ಪ್ರದರ್ಶಿಸಿವೆ.

ಈ ಎರಡೂ ಕಾಂಗ್ರೆಸ್ ಬಣಗಳ ಕೆಸರೆರಚಾಟದ ನಡುವೆ ಅಖಂಡ ಜಿಲ್ಲಾ ಕಾಂಗ್ರೆಸ್ ಪ್ರತಿಪಾದನೆ ಮಾಡುವ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಕ್ಕನ್ನ ಸವಸುದ್ದಿ ನೇತೃತ್ವದ ಪದಾಧಿಕಾರಿಗಳು, ಕಾರ್ಯಕರ್ತರು, ಕೆಲ ಮಾಜಿ ಹಾಲಿ ಹಿರಿಯ ಮುಖಂಡರು ಒಟ್ಟಾಗಿ ಎರಡೂ ಬಣಗಳಿಗೆ ಶೆಡ್ಡು ಹೊಡೆದಿದ್ದು ಪಕ್ಷದ ಒಟ್ಟಾರೆ ಬೆಳವಣಿಗೆಗಳ ಸಮಗ್ರ ಮಾಹಿತಿ ರಾಜ್ಯ ಉಸ್ತುವಾರಿಗೆ ಬುಧವಾರ ನೀಡಲು ಬೆಂಗಳೂರತ್ತ ಹಾರಿದ್ದಾರೆ.ಬೆಳಗಾವಿಯಲ್ಲಿ ಪಕ್ಷದ ರಾಜಕೀಯ ಬೆಳವಣಿಗೆಗಳ ಅವಲೋಕನದ ವರದಿ ಈ ತಂಡ ನೀಡಲಿದೆ ಎಂಬುವುದು ತಿಳಿದುಬಂದಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ವಿಧಾನಸಭೆ ಚುನಾವಣೆ ಮುನ್ನೆಲೆ ಇದ್ದಾಗ ಈ ರೀತಿ ಮುಸುಕಿನ ಗುದ್ದಾಟ ನಡೆಸಿರುವುದು ಜನತೆ ಮುಸಿಯಾಡುವಂತೆ ಮಾಡಿದ್ದು, ರಾಜ್ಯ ನಾಯಕರುಗಳಿಗೆ ತಲೆನೋವು ಸೃಷ್ಟಿಸಿದೆ.