SHARE

ಬೆಂಗಳೂರು/ಬೆಳಗಾವಿ: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಒಳಜಗಳಗಳು, ವ್ಯಕ್ತಿಗತ ಸ್ವಾರ್ಥದ ಅಧಿಕಾರಕ್ಕೇರುವ ಪೈಪೋಟಿ ಮತ್ತು ಎರಡೂ ಸರಕಾರಗಳ ಅಪ್ರಬುದ್ಧ ಆಡಳಿತ ವೈಖರಿ ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ತರುವುದು ನಿಶ್ಚಿತ ಎಂಬ ಚರ್ಚೆ ಗರಿಗೆದರಿದೆ.

ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಸೀಮಿತ ಎನ್ನಲಾಗುತ್ತಿದ್ದ ಜೆಡಿಎಸ್ ಈಗ ಸಾಕಷ್ಟು ಸುಧಾರಿಸಿಕೊಂಡಿದ್ದು, ತಮ್ಮ ಅಧಿಕಾರದ ಅವಧಿಯಲ್ಲಿ ಬೆಳಗಾವಿಯೆಡೆಗೆ ಎಚ್. ಡಿ. ಕುಮಾರಸ್ವಾಮಿ ತೋರಿದ್ದ ವಿಶೇಷ ಅಭಿವೃದ್ಧಿ ಕಾರ್ಯಕ್ರಮಗಳ ಉಡುಗೊರೆ ಕಾಳಜಿಯಿಂದ ಪಕ್ಷ ಉತ್ತರ ಕರ್ನಾಟಕದಲ್ಲೂ ಆಕರ್ಷಣೆ ಹೆಚ್ಚಿಸಿಕೊಂಡಿದೆ. ಕುಮಾರಸ್ವಾಮಿ ಈಗ ಹುಬ್ಬಳ್ಳಿಯಲ್ಲಿಯೇ ಮನೆ ಮಾಡಿ ಪಕ್ಷಕ್ಕೆ ಅಡಿಪಾಯ ಹಾಕುತ್ತಿದ್ದಾರೆ.

ಚುನಾವಣೆಯ ವರ್ಷಕ್ಕೆ ಮುಂಚೆಯೇ ಬಿಜೆಪಿ ಕಾಂಗ್ರೆಸ್ ಒಳಬೇಗುದಿ ಪ್ರಾರಂಭವಾಗಿದ್ದು ಇದರ ಲಾಭ ಈಗ ಜೆಡಿಎಸ್ ಪಡೆದುಕೊಳ್ಳಲು ಯತ್ನ ನಡೆಸಿದ್ದು ತಕ್ಕ ಜನಬೆಂಬಲವೂ ವ್ಯಕ್ತವಾಗುತ್ತಿದೆ. ಜನಬೆಂಬಲದ ವಾಸನೆ ಪಡೆದ ಕುಮಾರಸ್ವಾಮಿ ಈಗ “ಮನೆಮನೆಗೆ ಕುಮಾರಣ್ಣ” ಪಾದಯಾತ್ರೆ,ರಾಜ್ಯಪ್ರವಾಸ ಜೂ.1 ರಿಂದ ಹಮ್ಮಿಕೊಂಡಿದ್ದು ಜನರೊಂದಿಗೆ ಮುದ್ದೆ ಮುರಿದು,ರೊಟ್ಟಿ ಅಗೆದು ಚರ್ಚೆ ಮಾಡುವ ಕಾರ್ಯಕ್ರಮಕ್ಕೆ ಜೆಡಿಎಸ್ ದಿಟ್ಟ ಹೆಜ್ಜೆ ಇಟ್ಟಿದೆ.

ಮೊದಲು ರಾಜಧಾನಿ ಬೆಂಗಳೂರಲ್ಲಿ ಕನಿಷ್ಠ 15 ದಿನ ಕಾರ್ಯಕರ್ತರ ಪಾದಯಾತ್ರೆ ನಡೆಯಲಿದ್ದು ಎಚ್. ಡಿ. ದೇವೆಗೌಡರು ಹಾಗೂ ಕುಮಾರಸ್ವಾಮಿ ಅವಧಿಯ ಜನಪರ ಕಾರ್ಯಕ್ರಮಗಳ ವರದಿ ಹೊತ್ತು ಪಾದಯಾತ್ರೆ ಜನರಿಂದ ಅಭಿಪ್ರಾಯ ಸಂಗ್ರಹ ಹಾಗೂ ಪಕ್ಷಕ್ಕೆ ಬೆಂಬಲ ಯಾಚಿಸಲಿದೆ. ನಗರದೇವತೆ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ನಡೆಯುವ ಪಾದಯಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ ಬರಲಿದ್ದಾರೆ. ಬಿ. ಎಚ್. ಚಂದ್ರಶೇಖರ್, ಕೆ. ವಿ. ನಾರಾಯಣಸ್ವಾಮಿ ಹಾಗೂ ಬೆಂಗಳೂರು ನಗರಾಧ್ಯಕ್ಷ ಆರ್. ಪ್ರಕಾಶ ಕಾರ್ಯಕ್ರಮದ ರೂವಾರಿಗಳು. ತಮ್ಮ ಪಕ್ಷವನ್ನು ಜನತೆಯಿಂದ ವಿಶ್ವಾಸಕ್ಕೊಳಪಡಿಸುವ ಜೆಡಿಎಸ್ ಯತ್ನ ಸಫಲವಾಗುವ ಅಭಿಪ್ರಾಯವೂ ವ್ಯಕ್ತವಾಗಿದ್ದು ಕಾಂಗ್ರೆಸ್, ಬಿಜೆಪಿಯಲ್ಲಿ ತಳಮಳ ಸೃಷ್ಟಿಯಾಗಿದೆ. ಮುಂದಿನ ಸಿಎಂ ಕುಮಾರಸ್ವಾಮಿ ಎಂಬ ಸಾರ್ವಜನಕ ಚರ್ಚೆ ಗರಿಗೆದರಿದ ಸಂದರ್ಭ ಈ ಪಾದಯಾತ್ರೆ ಮಹತ್ವ ಪಡೆದುಕೊಂಡಿದೆ.