SHARE

ಬೆಳಗಾವಿ: 17 ವರ್ಷದ ಹಿಂದಿನ ಪ್ರಕರಣವೊಂದಕ್ಕೆ ಮಹತ್ವದ ಬೆಳವಣಿಗೆಯಲ್ಲಿ ಹಾಲಿ ಡಿಎಸ್ಪಿ, ನಿವೃತ್ತ ಪಿಎಸ್ಐ ವಿರುದ್ಧ ಖಾಸಗಿ ದೂರು ದಾಖಲಿಸಲು ಹೈಕೋರ್ಟ್ ತೀರ್ಪು ನೀಡಿದೆ. ಸದ್ಯ ಸಿಐಡಿ ಸೈಬರ್ ಕ್ರೈಂ ಡಿಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಎಸ್. ಎಂ. ಮುಚ್ಚಂಡಿ ಹಾಗೂ ನಿವೃತ್ತರಾಗಿರುವ ಪಿಎಸ್ಐ ಡಿ. ಎಂ. ಖಾಜಿ ವಿರುದ್ಧ ಖಾಸಗಿ ದೂರು ದಾಖಲಿಸಲು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಬೆಳಗಾವಿ ಹನುಮಾನ ನಗರ ನಿವಾಸಿ ಫಾರೂಕ್ ಮೊಹಮ್ಮದ ಛಾವೂಸ್ ಸೇರಿದಂತೆ ಇಬ್ಬರ ವಿರುದ್ಧ ದಾಖಲಾಗಿದ್ದ ಎಂಓಬಿ(Modus Operandi Bureau) ಕಾರ್ಡ್ ರದ್ದು ಮಾಡದಿರುವುದು ಹಾಗೂ ಕರ್ತವ್ಯಲೋಪ ಮಾಡಿದ್ದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ನ್ಯಾಯಾಲಯದ ಆದೇಶ ಹೊರಬಿದ್ದಿದೆ. ಭಾರತೀಯ ದಂಡ ಸಂಹಿತೆ ಪ್ರಕಾರ ಇಬ್ಬರ ವಿರುದ್ಧವೂ ಖಾಸಗಿ ದೂರು ದಾಖಲು ಮಾಡಲು ಹೈಕೋರ್ಟ್ ನಿರ್ದೇಶಿಸಿದೆ. ಬೆಳಗಾವಿ ಎಪಿಎಂಸಿ ಸಿಪಿಐ ಆಗಿದ್ದ ಮುಚ್ಚಂಡಿ ಹಾಗೂ ಎಎಸ್ಐ ಆಗಿದ್ದ ಖಾಜಿ ಕರ್ತವ್ಯಲೋಪ ಎಸಗಿದ ಆರೋಪವಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಎಸ್ಪಿ ಸಲ್ಲಿಸಿದ್ದ ತನಿಖಾ ವರದಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಏಕಪಕ್ಷೀಯ ಹಾಗೂ ಉದಾಸೀನ ಎಂದಿದೆ.

2001ರ ಅಕ್ಟೋಬರ್ 17 ರಂದು ಸದಾಶಿವ ನಗರದ ಶಿವಾಲಯದ ಬಳಿ ನಡೆದಿದ್ದ ಸರಗಳ್ಳತನ ಪ್ರಕರಣದಲ್ಲಿ ಎಪಿಎಂಸಿ ಪೊಲೀಸರು ಸುನೀಲ ಸುಣಗಾರ ಹಾಗೂ ಸೈಯ್ಯದ ಚಾವೂಸ್ ಎಂಬುವವರನ್ನು ವಶಕ್ಕೆ ಪಡೆದಿದ್ದರು. ಕಳ್ಳತನಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಗೋಗರೆದಿದ್ದರೂ ಕೇಳದ ಪೊಲೀಸ್ ಅಧಿಕಾರಿಗಳು ಇನ್ನೊಬ್ಬನ ಹೆಸರು ಹೇಳುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಆಗ ಫಾರೂಕ್ ಮೊಹಮ್ಮದ ಛಾವೂಸ್ ಎಂದು ಒತ್ತಡಕ್ಕೊಳಗಾದ ವ್ಯಕ್ತಿ ಹೇಳಿದ್ದ. ನಂತರ ಪೊಲೀಸರು ಬಾಲಕ(minor)ನನ್ನು 11 ದಿನ ಆತನನ್ನು ಅಕ್ರಮ ಬಂಧನದಲ್ಲಿರಿಸಿದ್ದರು. ಛಾವೂಸ್ ಬಳಿ ಸಾಕಷ್ಟು ಹಣದ ಬೇಡಿಕೆ ಇಟ್ಟಿದ್ದ ಪೊಲೀಸ್ ಅಧಿಕಾರಿಗಳು ಹಣ ಕೊಡಲೊಪ್ಪದಾಗ ಜೈಲಿಗೆ ಕಳಿಸಿದ್ದರು ಸಹ ಎನ್ನಲಾಗಿದೆ.
ಇದೇ ಪ್ರಕರಣದಲ್ಲಿ 2002 ಜುಲೈ 25 ರಂದು ಛಾವೂಸ್ ಮತ್ತು ಸುಣಗಾರ ಇಬ್ಬರನ್ನು ಆರೋಪ ಮುಕ್ತ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಜತೆಗೆ ಸಿಪಿಐ ಮುಚ್ಚಂಡಿ ಹಾಗೂ ಎಎಸ್ ಐ ಖಾಜಿ ಕಾರ್ಯನಿರ್ವಹಣೆಯನ್ನು ಕೋರ್ಟ್ ದೋಷಿಸಿತ್ತು. ಸ್ವತಃ ಹೈಕೋರ್ಟ್ ಮುಕ್ತ ಮಾಡಿದ್ದರೂ ಛಾವೂಸ್ ವಿರುದ್ಧ ಪೊಲೀಸರು ಎಂಓಬಿ ರದ್ದು ಮಾಡಿರಲಿಲ್ಲ. ಏತನ್ಮಧ್ಯೆ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವಂತೆ ಗೃಹ ಇಲಾಖೆ ಮೊರೆ ಹೋಗಲಾಗಿತ್ತಾದರೂ ಅಲ್ಲಿಯೂ ನ್ಯಾಯ ಸಿಗದೆ ಮತ್ತೆ ಪ್ರಕರಣ ಹೈಕೋರ್ಟಿನ ಮೆಟ್ಟಿಲೇರಿತ್ತು.

ತಪರಾಕಿ… ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿದಾರರು ದೂರು ಸಲ್ಲಿಸಿ ತನಿಖೆಗೆ ಆಗ್ರಹಿಸಿ ನ್ಯಾಯ ಕೇಳಿದ್ದರು ಪ್ರಯೋಜನವಾಗಿರಲಿಲ್ಲ. ಹೈಕೋರ್ಟ್ WP No.108515/2015 ಮನವಿ ಪುರಸ್ಕರಿಸಿ ಬೆಳಗಾವಿ ಜಿಲ್ಲಾ ಎಸ್ಪಿಗೆ ನಿರ್ದೇಶನ ನೀಡಿ ಸದರಿ ಪ್ರಕರಣದ ಕೂಲಂಕೂಷ ತನಿಖೆ ಮಾಡಿ ವರದಿ ಕೊಡಲು ಸೂಚಿಸಿತ್ತು.
ಪ್ರಕರಣದ ತನಿಖೆ ಮಾಡಿರುವ ಎಸ್ಪಿ ವರದಿಯಲ್ಲಿ ಸರಿಯಾದ, ಪ್ರಾಮಾಣಿಕ ತನಿಖೆಯಾಗಿಲ್ಲ. ಪ್ರಕರಣವನ್ನು ಹಾಗೇ ಮುಚ್ಚಿ ಹಾಕುವ ಯತ್ನ ನಡೆದಿದೆ. ಆದ್ದರಿಂದ ಎಸ್ಪಿ ತನಿಖಾ ವರದಿ ಸ್ವೀಕಾರಾರ್ಹವಲ್ಲ ಎಂದು ಕೋರ್ಟ ವರದಿ ತಿರಸ್ಕರಿಸಿದೆ. ಆದ್ದರಿಂದ ಎಪಿಎಂಸಿ ಠಾಣಾ ವ್ಯಾಪ್ತಿಯ ದಂಡಾಧಿಕಾರಿ ಅವರು ಫಾರೂಕ್ ಮೊಹಮ್ಮದ ಛಾವೂಸ್ ಅವರ ದೂರು ಮನವಿ ಪಡೆದು ಆರೋಪಿತ ಅಧಿಕಾರಿಗಳ ವಿರುದ್ಧ ಐಪಿಸಿ ಅಡಿ ಹಾಗೂ ಭ್ರಷ್ಟಾಚಾರ ನಿಗ್ರಹ ಕಾನೂನಿನಡಿ ಖಾಸಗಿ ದೂರು ದಾಖಲಿಸಲು ಕೋರ್ಟ್ ನಿರ್ದೇಶಿಸಿದೆ. ಜತೆಗೆ ಅಗತ್ಯ ಬಿದ್ದರೆ ಸೆಷನ್ ಕೋರ್ಟ್ ಗೆ ಇಲ್ಲವೇ ವಿಶೇಷ ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡಿ ಸರಿಯಾದ ತನಿಖೆ ಮಾಡಿಸುವಂತೆ ಸೂಚಿಸಿದೆ. ಎಸ್ಪಿ ಮಾಡಿದ ತನಿಖೆ ಏಕಪಕ್ಷೀಯವಾಗಿದ್ದು, ನೊಂದವರ ಮಾತಿಗೆ ಬೆಲೆ ಕೊಡದೇ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಿದ್ದಲ್ಲದೇ ಪ್ರಕರಣದ ತನಿಖೆ ಪ್ರಮಾಣಿಕವಾಗಿ ಮಾಡುವ ಉದ್ದೇಶ( police have No intention to do impartial enquiry) ಎಸ್ಪಿಗೆ ಇಲ್ಲ ಇಂದು ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಠ ಅಭಿಪ್ರಾಯಪಟ್ಟಿದೆ. ಇದೇ ಜು. 31 ಕ್ಕೆ ನಿವೃತ್ತಿ ಅಂಚಿನಲ್ಲಿರುವ ಡಿಎಸ್ಪಿ ಮುಚ್ಚಂಡಿ ಅವರಿಗೆ ಕೊನೆಗೂ ಕಾನೂನಿನ ಅಸ್ತ್ರ 17 ವರ್ಷದ ನಂತರ ಉರುಳು ಹಾಕಿದೆ.

ಕೋಟ್… ಪೊಲೀಸ್ ನೌಕರಿಯ ದುರುಪಯೋಗ ದರ್ಪದ ಮೂಲಕ ಮೆರೆದ ಡಿಎಸ್ಪಿ ಮುಚ್ಚಂಡಿ ಹಾಗೂ ನಿವೃತ್ತ ಪಿಎಸ್ ಐ ಖಾಜಿ ವಿರುದ್ಧ ದೊಡ್ಡ ಮೊತ್ತದ ಮಾನಹಾನಿ ಪ್ರಕರಣ ದಾಖಲಿಸುವೆ. ಜಿಲ್ಲಾ ಎಸ್ಪಿ ಉದಾಸೀನ ತನಿಖೆ ಕೋರ್ಟನಲ್ಲಿ ತಿರಸ್ಕಾರವಾಗಿದ್ದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ (ಫಾರೂಕ್ ಮೊಹಮ್ಮದ್ ಛಾವೂಸ್)