SHARE

By: G. Purushotham

ಬೆಳಗಾವಿ: ಕೆಸರುಗದ್ದೆ ಓಟ ಸಾಹಸ ಕ್ರೀಡೆಯ ಬಗ್ಗೆ ಕೇಳಿ; ನೋಡಿದ್ದೀರಿ. ಆದರೆ ಬಸ್ ಗಳು ಕೆಸರುಗದ್ದೆ ಓಟ ಮಾಡುವುದನ್ನು ನೋಡಿದ್ದೀರಾ? ಹಾಗಾದರೆ ಬೆಳಗಾವಿಗೆ ಬನ್ನಿ…! ನಗರಕ್ಕೆ ಬರುವ ಪರ ಊರಿನ ಅತಿಥಿಗಳಿಗೆ ಬೆಳಗಾವಿ ಜನತೆ ಸರಕಾರಿ ಆಡಳಿತದ ನಾಗರಿಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದಾರೆ ಎಂದೆನ್ನಿಸುವುದಿಲ್ಲ. ಮುಂಗೈ ಹಿಡಿದು ಕೇಳುವ ಮಟ್ಟಕ್ಕೆ ಇಳಿಯದ ಬೆಳಗಾವಿ ಜನರ ದೊಡ್ಡಮನಸ್ಸಿನ ಧೋರಣೆಯನ್ನು ಇಲ್ಲಿನ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಕೇವಲವಾಗಿ ಪರಿಗಣಿಸಿದ್ದಾರೆ. ಆಡಳಿತ ಗುಡ್ಡ ಅಗೆದು ಗುಡ್ಡೆ ಹಾಕುವುದು ಒತ್ತಟ್ಟಿಗಿರಲಿ ಅತಿ ಸಾಮಾನ್ಯ ನಾಗರಿಕ ಸಮಸ್ಯೆಗಳನ್ನೂ ಬಗೆಹರಿಸಿ, ಒದಗಿಸುವಲ್ಲಿ ಸರಕಾರ ವಿಫಲವಾದರೆ ಹೇಗೆ? ಸಾರ್ವಜನಿಕ ಸೇವೆ ನೀಡುವ ಸುಸಜ್ಜಿತ ಸರಕಾರಿ ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಗಮನ ಸೆಳೆದು, ಲೇಖನಿ ಬರೆದು-ಬರೆದು ಮಾಧ್ಯಮಗಳು ಬೇಸತ್ತಿವೆ, ಜನತೆಯೂ ಕಂಗೆಟ್ಟು ಅಸಹಾಯಕತೆಯಿಂದ ಸುಮ್ಮನಾಗಿದ್ದಾರೆ. ಆಡಳಿತ ಮಾತ್ರ ಮಜುಗುರ ಪಟ್ಟುಕೊಂಡಿಲ್ಲ. ಹಂದಿಗೂ ನಾಗರಿಕನಿಗೂ ನಡುವಿನ ವ್ಯತ್ಯಾಸವನ್ನು ಆಡಳಿತ ಗುರುತಿಸುವಲ್ಲಿ ವಿಫಲವಾಗಿದ್ದು ಅಷ್ಟೇ ಅಸಹ್ಯಕರ. ಎಷ್ಟೋ ವರ್ಷಗಳ ಹೋರಾಟ, ಕೂಗಾಟ, ಪರಚಾಟದ ನಂತರ, ತಮಗೆ ಅನುಕೂಲವಾದಾಗ ಕೇಂದ್ರ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ಕೊಟ್ಟ ಸರಕಾರಕ್ಕೆ, ಕಾಮಗಾರಿ ಮುಗಿಯುವವರೆಗೆ ಪರ್ಯಾಯವಾಗಿ ನಿಲ್ದಾಣದ ವ್ಯವಸ್ಥೆ ಮಾಡಲಾಗದಷ್ಟು ಬುದ್ಧಿ ಭ್ರಷ್ಟವಾದರೆ ಹೆಂಗೆ ಮಾರಾಯಾ ಎಂದು ಜನತೆ ಮಾತಾಡಿಕೊಳ್ಳುತ್ತಿದ್ದಾರೆ. ಕೆಸರು ಗದ್ದೆ ಓಟ ಎಂಬ ಕ್ರೀಡೆಯ ಬಗ್ಗೆ ಕೇಳಿದ್ದೀರಿ, ಈಗ ಮನುಷ್ಯರಷ್ಟೇ ಅಲ್ಲ….ಕೆಸರುಗದ್ದೆ ಓಟ ಬಸ್ ಗಳು ಪ್ರಾರಂಭಿಸಿವೆ. ಈ ಅಪರೂಪದ ದೃಶ್ಯ ನೋಡಲು ಬೆಳಗಾವಿಗೆ ಬಂದವರು ನಿಲ್ದಾಣದ ಕೆಸರಲ್ಲಿ ಮಿಂದು ಸಂತೋಷಪಡಬಹುದು. ಕೇಂದ್ರ ಬಸ್ ನಿಲ್ದಾಣವಿದ್ದ ಅದೇ ವಿಸ್ತರಿತ ವಿಶಾಲ ಜಾಗದಲ್ಲೇ ಕೇಂದ್ರ ಬಸ್ ನಿಲ್ದಾಣ ಮಾಡಲಾಗಿದ್ದು, ಮಳೆ ನೀರಿನಿಂದ ಇಡೀ ಬಸ್ ನಿಲ್ದಾಣ ತುಂಬಿ ಕೆಸರಾಗಿದೆ. ಬಸಗಳು ಪ್ರಯಾಣಿಕರು ಇದರಲ್ಲಿ ತಮ್ಮ ಓಡಾಟ ನಡೆಸಿದ್ದು, ನಾಗರಿಕರಿಗೆ ವ್ಯಾಪಕ ತಲೆನೋವು ಸೃಷ್ಟಿಸಿದೆ. ಚೆಂದವಾಗಿ ಸಿಂಗರಿಸಿಕೊಂಡು ಊರಿಗೆ ಹೊರಟ ವ್ಯಕ್ತಿ, ನಿಲ್ದಾಣದಲ್ಲಿ ರೊಜ್ಜು ಸಿಡಿಸಿಕೊಂಡು ಹೋಗಬೇಕಿದೆ. ಪಿತ್ತ ನೆತ್ತಿಗೇರುವ ನಾಗರಿಕರು ಥೂ…ಇವರೌ… ಎಂದು ಮರಗುತ್ತ ಮುಂದೆ ಸಾಗುತ್ತಾರೆ. ನಿಲ್ದಾಣವನ್ನು ಸ್ವಚ್ಛ ಸುಂದರವಾಗಿ ಯಾರು ಇಡಬೇಕು. ಈ ಕೊಳಚೆ ವಾತಾವರಣ ನೋಡಿ ಆರೋಗ್ಯ ಇಲಾಖೆ ಅಧಿಕಾರಿಗಳು ಆಕ್ಷೇಪ ಎತ್ತದೇ ಯಾಕೆ ಸುಮ್ಮನಿದ್ದಾರೆ, ಮಹಾನಗರ ಪಾಲಿಕೆ ಇಲ್ಲವೇ ಸಾರಿಗೆ ಇಲಾಖೆಗೆ ಈ ನಿಲ್ದಾಣದ ವಾತಾವರಣ ನೋಡಲು, ಉಪಯೋಗಿಸಲು ಸರಿ ಎನ್ನಿಸುತ್ತದೆಯೇ ಎಂಬೆಲ್ಲ ಪ್ರಶ್ನೆಗೆ ಆಡಳಿತವೇ ಉತ್ತರಿಸಬೇಕಿದೆ. ಸಿಬಿಟಿ (City Bus Terminals) ರೂಪ ಪದಗಳಲ್ಲಿ ಕಟ್ಟಿಕೊಡಲು ಬರೆಯುವವನಿಗೇ ತೀರಾ ಅಸಹ್ಯವೆನಿಸುತ್ತದೆ.‘ಹೊಸ ಬಸ್ ಸ್ಟ್ಯಾಂಡ್ ಕಟ್ಟಿಸಿಕೊಡುತ್ತಿದ್ದೇವೆ ಅಲ್ರೀ’ ಎನ್ನಬಹುದಾದ ಆಡಳಿತ ವ್ಯವಸ್ಥೆಗೆ ‘ಪ್ಯಾಂಟ್ ಹೊಲೆಸುವವರೆಗೆ ಹಾಗೇ…ನಿಲ್ಲಲಾಗುತ್ತದೆಯೇ’ ಎಂಬ ಬಗ್ಗೆ ಉತ್ತರ ಕಂಡುಕೊಂಡರೆ ವ್ಯವಸ್ಥೆ ಸುಧಾರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.