SHARE

ಬೆಳಗಾವಿ: ದೇಶದಲ್ಲಿ ಇತರ ಧರ್ಮಗಳಂತೆ ಲಿಂಗಾಯತ ಪ್ರತ್ಯೇಕ ಧರ್ಮವಾಗಿ ಘೋಷಿಸುವ ಅಗತ್ಯತೆ ಇದೆ ಎಂದು ಕೂಡಲಸಂಗಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಇಂದು ಸುದ್ದಿಗೋಷ್ಠಿ ನಡೆಸಿದ ಅವರು ದೇಶದ ಎರಡು ಪ್ರಮುಖ ರಾಷ್ಟೀಯ ಪಕ್ಷಗಳಿಗೆ ಲಿಂಗಾಯತ ಧರ್ಮವನ್ನು ಸಂವಿಧಾನಾತ್ಮಕವಾಗಿಯೇ ಧರ್ಮವೆಂದು ಘೋಷಿಸಿ ಲಿಂಗಾಯತ ಸಮಾಜದ ಋಣ ತೀರಿಸುವ ಅವಕಾಶ ಸದ್ಯ ಲಭಿಸಿದೆ. ಈ ಬಗ್ಗೆ ಇತರ ಧರ್ಮ ಗುರುಗಳು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಬಾರದು ಎಂದು ಸ್ವಾಮೀಜಿ ಮನವಿ ಮಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಧರ್ಮ ಘೋಷಿಸುವಂತೆ ಕೇಂದ್ರಕ್ಕೆ ಸಿಫಾರಸ್ಸು ಮಾಡಬೇಕು, ಹಾಗೇ ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವ ಬಗ್ಗೆ ಮನವರಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಲಿಂಗಾಯತ ಧರ್ಮದ ಎಲ್ಲರೂ ಒಮ್ಮನಸ್ಸಿನ ಒಗ್ಗಟ್ಟು ಪ್ರದರ್ಶಿಸಬೇಕು. ಲಿಂಗಾಯತ ಮತ್ತು ವೀರಶೈವ ಎರಡು ಸಮನಾದ ಪದಗಳಲ್ಲ. ಎರಡು ಪದಗಳಿಗೆ ಸಮಾನತೆ ಇಲ್ಲವೇ ಇಲ್ಲ. ನಮ್ಮ ಹೋರಾಟ ಇರುವುದು ಲಿಂಗಾಯತ ಧರ್ಮ ಮಾಡುವ ಸಲುವಾಗಿ. ಲಿಂಗಾಯತ ಧರ್ಮದ ಹೋರಾಟದ ಹೆಸರಲ್ಲಿ ರಾಜಕೀಯ ಯಾರೂ ಮಾಡಬಾರದು. ಲಿಂಗಾಯತ ಮತ್ತು ವೀರಶೈವ ಜನಾಂಗ ಇಬ್ಬರೂ ಒಂದೇ ಆದರೂ ಸಮಾನರಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ. ರವಿ ಪಾಟೀಲ, ನ್ಯಾಯವಾದಿ ಆರ್. ಬಿ. ರೊಟ್ಟಿ ಉಪಸ್ಥಿತರಿದ್ದರು.