SHARE

ಬೆಳಗಾವಿ: ಜನರ ಜಿಲ್ಲಾಧಿಕಾರಿ, ಬೆಳಗಾವಿಗರ ಮನೆ ಮಗ, ಎಂಇಎಸ್ ಗೆ ಸಿಂಹಸ್ವಪ್ನ ಎನ್. ಜಯರಾಮ ಸುದೀರ್ಘ ನಾಲ್ಕು ವರ್ಷಗಳ ಸೇವೆ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಬೆಂಗಳೂರತ್ತ ನಡೆದಿದ್ದಾರೆ. ಕೆಳಹಂತದ ಅಧಿಕಾರಿ ವರ್ಗ, ಜನಪ್ರತಿನಿಧಿಗಳು, ಮಾಧ್ಯಮಗಳು, ಸಂಘಸಂಸ್ಥೆಗಳು ಹಾಗೂ ಜನಸಾಮಾನ್ಯರೊಂದಿಗೆ ಸಹಜ ಸೌಜನ್ಯ, ಸೌಮ್ಯತೆಯಿಂದ ವರ್ತಿಸಿ, ತಮ್ಮ ಕಚೇರಿ ಬಾಗಿಲು ಸದಾ ಜನಭೇಟಿಗೆ ತೆರೆದಿಟ್ಟುಕೊಂಡಿದ್ದ ಎನ್. ಜಯರಾಮ ಜಿಲ್ಲೆಯನ್ನು ಸಮಯೋಚಿತ ಆಡಳಿತದಲ್ಲಿ ತೊಡಗಿಸಿ ಬೇಷ್ ಎನ್ನಿಸಿಕೊಂಡಿದ್ದರು. ದೇಶದ ರಾಷ್ಟ್ರಪತಿ, ಪ್ರಧಾನಿಗಳ ಆಹ್ವಾನ; ಯಶಸ್ವಿ ನಾಲ್ಕು ವಿಧಾನಮಂಡಲ ಅಧಿವೇಶನ ನಡೆಸಿದ್ದು, ನಾಡವಿರೋಧಿ ಚಟುವಟಿಕೆಗಳನ್ನು ಹದ್ದು ಬಸ್ತಿನಲ್ಲಿಟ್ಟಿದ್ದು, ಸರಕಾರಿ ಸಭೆ, ಸಮಾರಂಭ, ಸಾರ್ವಜನಿಕ ಉತ್ಸವಗಳು, ರಾಷ್ಟ್ರೀಯ ಹಬ್ಬಗಳ ಅಚ್ಚುಕಟ್ಟಿನ ಆಯೋಜನೆ ಸೇರಿ ದೊಡ್ಡ ಜಿಲ್ಲೆಯ ಇಡೀ ಆಡಳಿತ ವ್ಯವಸ್ಥಿತವಾಗಿ ನಡೆಸಿ ಗಮನ ಸೆಳೆದಿದ್ದರು.

ಬೆಳಗಾವಿಗರ ಮನೆ ಮಗನಾಗಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲೂಕು ಕೆ. ಟಿ ಹಳ್ಳಿಯ ಹುಡುಗ 2013 ರ ಫೆ. 7 ಕ್ಕೆ ಬೆಳಗಾವಿ ಜಿಲ್ಲಾಧಿಕಾರಿಯಾಗಿ, ಚಾಮರಾಜನಗರದಿಂದ ಆಗಮಿಸಿದ ಜಯರಾಮ ವಿಧಾನಸಭೆಗೆ ನಡೆದ ಚುನಾವಣೆ ಹಿನ್ನೆಲೆಯಲ್ಲಿ Election Commissioner of India ನಿರ್ಧಾರದಂತೆ ಹಿರಿಯ ಐಎಎಸ್ ಅಧಿಕಾರಿ ಮುನೀಷ್ ಮೌದ್ಗೀಲ್ ಅವರಿಗೆ ಹುದ್ದೆ ಬಿಟ್ಟುಕೊಟ್ಟು ಬೆಂಗಳೂರಿಗೆ ತಿಂಗಳಲ್ಲೇ ವರ್ಗಾವಣೆಯಾದರು. ಚುನಾವಣೆ ಮುಗಿದ ನಂತರ 2013ರ ಮೇ. 25 ಕ್ಕೆ ಮತ್ತೆ ಆಗಮಿಸಿದ ಜಯರಾಮ ಇಂದಿಗೆ ತಮ್ಮ 4 ವರ್ಷ ಮೇಲ್ಪಟ್ಟು ಯಶಸ್ವಿ ಆಡಳಿತ ಮುಂದುವರೆಸಿದ್ದರು.‘ಝಾಪಾ’ ಗಳಿಗೆ ನೇರ ಟಾಂಗ್ ಕೊಟ್ಟು ಗಡಿ ಕ್ಯಾತೆಗೆ ಲಗಾಮು ಹಾಕಿದ್ದ ಖ್ಯಾತಿ ಡಿಸಿ ಜಯರಾಮ್ ಅವರಿಗೆ ಸಲ್ಲುತ್ತದೆ.

ಭೂಮಿ ಸೇವೆಗಳು, ಲೋಕಸಭಾ ಹಾಗೂ ಸ್ಥಳೀಯ ಚುನಾವಣಾ ಅಕ್ರಮಗಳ ಸುಧಾರಣೆ, ನಾಗರಿಕ ಸೇವೆಗಳ ಅಭಿವೃದ್ಧಿ, ಗ್ರಾಮೀಣ ಜನತೆಯ ದುಖಃ ದುಮ್ಮಾನಗಳಿಗೆ ಕಿವಿಗೊಟ್ಟು ಯಶಸ್ವಿಯಾದ ಅವರು ಮಾಡಿದ ‘ಜಿಲ್ಲಾಡಳಿತದ ನಡೆ ಹಳ್ಳಿ ಯೆಡೆಗೆ’ ಕಾರ್ಯಕ್ರಮ ರಾಜ್ಯದ ಅಗಲಕ್ಕೂ ಹೆಸರಾಗಿದೆ. ಭಾನುವಾರ ರಾಜ್ಯದ ಗಡಿಭಾಗದ ಹಳ್ಳಿಯೊಂದಕ್ಕೆ ಸರಕಾರಿ ಬಸ್ ನಲ್ಲಿ ಅಧಿಕಾರಿಗಳನ್ನು ಕರೆದೊಯ್ದು ಶ್ರಮದಾನ ಮಾಡಿಸಿದ್ದು ಆ ನಂತರ ಅಧಿಕಾರಿ ವರ್ಗ ನೀಡದ ಸಾಥ್ ನಿಂದ ಜಿಲ್ಲಾಡಳಿತದ ನಡೆ ಹಳ್ಳಿಯೆಡೆಗೆ ನಿಂತು ಹೋಯಿತು. ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಸಲ್ಲಿಸಿದ PIL ಪ್ರತಿಫಲದ ಆದೇಶ ಹಿಡಿದು ಯಳ್ಳೂರು ಮಹಾರಾಷ್ಟ್ರ ಫಲಕ ತೆಗೆಸುವಲ್ಲಿ ಮುಲಾಜಿಲ್ಲದ ನಡೆ, ಪಡೆದ ಯಶಸ್ಸು ಅಭಿನಂದನಾರ್ಹ. ಏಳು ಜಿಲ್ಲೆಗಳ ಆಡಳಿತಾತ್ಮಕ ಮುಖ್ಯಸ್ಥರಾಗಿ, ಜಿಲ್ಲಾಧಿಕಾರಿ ಯಾಗಿ ತಮ್ಮ ಕೆಳ ಹಾಗೂ ಸಮಾನ ಶ್ರೇಣಿ ಅಧಿಕಾರಿಗಳನ್ನು ಒಗ್ಗೂಡಿಸಿಕೊಂಡು ನಡೆಯುತ್ತಿರುವ ಸೌಮ್ಯ ಮತ್ತು ಸಾಂದರ್ಭಿಕ ಹಾಸ್ಯ ಪ್ರಜ್ಞೆಯ ಜಿಲ್ಲಾಧಿಕಾರಿ ಅವರ ಬಗ್ಗೆ ಹಲವು ಬಾರಿ ಪ್ರಶಂಸೆ ವ್ಯಕ್ತವಾಗಿವೆ. ಮರಾಠಿಗರಿಗೆ ಟಾಂಗ್… ಬೆಳಗಾವಿ ಮರಾಠಿ ಭಾಷಿಕರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ ಎಂಇಎಸ್ ಮುಖಂಡ ಕಿರಣ ಠಾಕೂರ್ ಅಲಿಯಾಸ ಮಾಮಾ ಮತ್ತು ಆತನ ಪಟಾಲಂ “ನೀವು ಭಾಷಾ ಅಲ್ಪ ಸಂಖ್ಯಾತರ ಆಯೋಗದ ಆದೇಶ ಅನುಷ್ಠಾನಗೊಳಿಸದೇ ಇಲ್ಲಿಯ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡುತ್ತಿದ್ದೀರಿ, ನಾವು ಕರ್ನಾಟಕ್ಕೆ ನೀರು ಕೊಟ್ಟಿದ್ದೇವೆ” ಎಂದು ಅಂದಿದ್ದೇ ತಡ, ನೀವ್ಯಾರ್ರಿ ನಮ್ಗೆ ನೀರು ಕೊಡೊಕೆ? ನೀರು ಕೊಟ್ಟಿದ್ದು ಮಹಾರಾಷ್ಟ್ರ ಸರ್ಕಾರ…. ನೀವೂ ಕೂಡಾ ಕರ್ನಾಟಕದ ಪ್ರಜೆ ಅನ್ನುವುದನ್ನು ಮರೆಯಬೇಡಿ ಎಂದು ಖಡಕ್ ಆಗಿಯೇ ಉತ್ತರ ನೀಡಿದ್ದರು. ಈ ಸಂವಾದ ಇಲ್ಲಿಗೆ ನಿಲ್ಲದೇ “ನೀವು ಮೊದಲು ಭಾರತೀಯ ಪ್ರಜೆ ಕರ್ನಾಟಕದ ಪರವಾಗಿ ಮಾತನಾಡಬೇಡಿ” ಎಂದು ಮಾಮಾನ ಸೇನೆ ಅಂದಿತು. “ಅಲ್ರಿ, ಇಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಂದು, ಮಾಧ್ಯಮಗಳಿವೆ ಎಂದು ಗಡಿ ವಿವಾದ ತೆಗೆದು ಹಿರೋ ಆಗಬೇಡಿ. ನನಗೆ ನನ್ನ ಊರು, ನನ್ನ ರಾಜ್ಯವೇ ಮೊದಲು, ನಾನು ಮೊದಲು ಕನ್ನಡಿಗ” ಎಂದು ಹೆಮ್ಮೆಯಿಂದ ಹೇಳಿದ್ದ ಜಿಲ್ಲಾಧಿಕಾರಿ ಎನ್. ಜಯರಾಮ ಅವರಿಗೆ ವರ್ಗವಾಗಿದೆ. ನಾಲ್ಕು ವರ್ಷಗಳ ಜನರ ಜಿಲ್ಲಾಧಿಕಾರಿಯಾಗಿ, ಯಶಸ್ವಿಯಾಗಿ ಆಡಳಿತ ನಡೆಸಿ, ಒಬ್ಬ ಕನ್ನಡಿಗನಾಗಿ ಈ ಗಡಿ ಭಾಗದಲ್ಲಿ ಏನು ಮಾಡಬೇಕಿತ್ತೋ ಅದನ್ನೇ ಮಾಡಿ ಬೆಳಗಾವಿ ಕನ್ನಡಿಗರ ಮನ ಗೆದ್ದರು. ನಾನೇ ರಸ್ತೆಗಿಳಿಯಬೇಕೇನೊ?: 2013 ರ ಆಗಸ್ಟ್ 1 ರಿಂದಲೇ ಬೆಳಗಾವಿಯಲ್ಲಿ ಆಟೋ ಮೀಟರ್ ಕಡ್ಡಾಯ ಮಾಡಿ ಜಾರಿ ಮಾಡುವಂತೆ ಡಿಸಿ ಆದೇಶದ ನಂತರವೂ ಪೊಲೀಸ್ ಇಲಾಖೆ ಎಡವುತ್ತ ಬಂತು. ಪದೇ ಪದೇ ಡಿಸಿ ನಿರ್ದೇಶನ ನೀಡಿದರೂ ಜಾರಿ ಮಾಡಬೇಕಾದ ಇಲಾಖೆಗಳು ಸುಮ್ಮನಾದವು. ಆಟೋ ಗ್ರಾಹಕರಿಗೆ ಕನಿಷ್ಠ ₹20, ಪ್ರತಿ ಕಿಮೀಗೆ ₹10 ಎಂದು ಡಿಸಿ ಜನರ ಪರವಾಗಿ ದರ ನಿಗದಿ ಮಾಡಿದ್ದರು. ಕೆಳಹಂತದ ಪೊಲೀಸ್ ಅಧಿಕಾರಿಗಳು ಪ್ರಯತ್ನಪಟ್ಟರು, ಉನ್ನತ ಅಧಿಕಾರಿಗಳು ತೋರಿದ ಧೋರಣೆಯಿಂದ ಫ್ಲಾಪ್ ಆಯಿತು. ಇನ್ನೂ ನಾನೇ ರಸ್ತೆಗಿಳಿದು ಆಟೊ ಮೀಟರ್ ಜಾರಿ ಮಾಡಬೇಕೆನೋ… ಎಂದು ಹಾಸ್ಯ ಮಿಶ್ರಿತ ನೋವು ತೋಡಿಕೊಂಡಿದ್ದರು ಜಯರಾಮ. ಟಿಕೇಟ್ ಕೌಂಟರ್ ಸಹ ಮಾಡಿಕೊಡಲಾಗಿತ್ತು. ಉಬ್ಬರ-ಬರ ನಿರ್ವಹಣೆ: 2013 ರ ಜುಲೈನಲ್ಲಿ ಭೀಕರ ನದಿ ಉಬ್ಬರದ ಸಮಯ ಚಿಕ್ಕೋಡಿ, ರಾಯಭಾಗ, ಅಥಣಿ ತಾಲೂಕುಗಳ 39 ಹಳ್ಳಿಗಳಲ್ಲಿ ಎಸ್ಪಿ ಡಾ. ಚಂದ್ರಗುಪ್ತ ಅವರೊಂದಿಗೆ ಭಾಗಶಃ ನಡೆದು ತಿರುಗಾಡಿ ಔಷಧಿ, ಕುಡಿಯುವ ನೀರು, ಆಹಾರ, ಬೋಟ್ ವ್ಯವಸ್ಥೆ, ಜಾನುವಾರುಗಳಿಗೆ ಮೇವು ವಿತರಿಸಿದ್ದರು.

ಪೊಲೀಸ್ ಸಿಬ್ಬಂಧಿಗೆ ಧ್ವನಿ: ತಮ್ಮ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಸೇವಾನ್ಯೂನ್ಯತೆಗಳನ್ನು ಸರಿಪಡಿಸಲು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಾದಿ ಹಿಡಿದಿದ್ದ ಪೊಲೀಸ್ ಸಿಬ್ಬಂಧಿಯ ಮನವೊಲಿಸಲು ಅಂದಿನ ಆಯುಕ್ತ ಸೌಮೇಂದು ಮುಖರ್ಜಿ, ಎಸ್ಪಿ ಡಾ. ರವಿಕಾಂತೇಗೌಡ ಜತೆಗೆ ಪೊಲೀಸರ ಮನೆ ಮನೆ ತಿರುಗಾಡಿ ಕ್ವಾಟರ್ಸ್ ಗಳ ಸಮಸ್ಯೆ ಬಗೆಹರಿಸುವ ಯತ್ನ ಮಾಡಿದ್ದರು. ಪಾಲಿಕೆ ಹಾಗೂ ಲೊಕೋಪಯೋಗಿ ಇಲಾಖೆಗಳನ್ನು ಪೊಲೀಸ್ ವಸತಿ ಪ್ರದೇಶಗಳ ಅಭಿವೃದ್ಧಿಗೆ ಅಣಿಗೊಳಿಸಿದ್ದರು. ಪ್ರತಿಭಾನ್ವಿತ ಪೊಲೀಸರ ಮಕ್ಕಳಿಗೂ ಜಿಲ್ಲಾಡಳಿತದ ಪ್ರತಿಭಾ ಪುರಸ್ಕಾರ ಕೊಡಿಸಲು ಡಿಸಿ ಉತ್ಸಾಹ ತೋರಿಸಿದ್ದರು.ಮಕ್ಕಳ ಆಶಾಕಿರಣ: ಸರಕಾರಿ ಹಾಸ್ಟೇಲ್ ಮತ್ತು ಖಾಸಗಿ ವಲಯದಿಂದ ಬಂದ ಬಡ ಪ್ರತಿಭಾವಂತ ಮಕ್ಕಳಿಗೆ ದಾನಿಗಳೀಂದ ಡಿಡಿ ರೂಪದಲ್ಲಿ ಹಣ ಸಂಗ್ರಹಿಸಿ; ಸುವರ್ಣಸೌಧದ ಸೆಂಟ್ರಲ್ ಹಾಲನಲ್ಲಿ ಗೌರವಪೂರ್ವಕ ಸಹಾಯ ಮಾಡಿಸಿದ್ದರು, ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿಗೆ ಬಡ ಹಾಗೂ ನಿರ್ಗತಿಕ ಮಕ್ಕಳನ್ನು ದತ್ತು ಕೊಡುವ ಮೂಲಕ ನೆರವಾಗಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಂತೆ ಪ್ರೋತ್ಸಾಹ ಉತ್ತೇಜನ ನೀಡಿದ್ದಲ್ಲದೇ, ಚತುರ ನಡೆಯಲ್ಲಿ ರಾಜ್ಯ ಸರಕಾರಕ್ಕಿಂತ ಮೊದಲು ದೇಶದ IAS topper ಕೋಲಾರದ ಕೆ. ನಂದಿನಿ ಅವರನ್ನು ಕರೆಸಿ ಸನ್ಮಾನಿಸಿ, ಸ್ಪರ್ಧಾಕಾಂಕ್ಷಿಗಳಿಗೆ ಹುರಿದುಂಬಿಸಿದರು.

ಡೋರ್ ಓಪನ್; ತಾಳ್ಮೆಯ ಸಾಕಾರಮೂರ್ತಿ: ಭೇಟಿ ಮಾಡಲು ಬರುವ ಜನರಿಗೆ ಯಾವಾಗಲಾದರೂ ಸದಾ ಕಚೇರಿ ಬಾಗಿಲು ತೆರೆದಿರುತ್ತಿತ್ತು. ಡಿಸಿ ಚೇಂಬರನಲ್ಲಿದ್ದರೆ, ಅವರ ಕಚೇರಿ ಜನರಿಂದ ತುಂಬಿರುತ್ತಿತ್ತು. ಬಹಳ ತಾಳ್ಮೆ ಹೊಂದಿದ್ದ ಡಿಸಿ ಎಂದು ಜನತೆಗೆ ಸಿಡಿಮಿಡಿಗೊಳ್ಳಲಿಲ್ಲ. ದಸರಾ ಮಾದರಿ ರಾಜ್ಯೋತ್ಸವ ನವೆಂಬರ್ 1 ರ ರಾಜ್ಯೋತ್ಸವ ಮೈಸೂರು ದಸರಾ ಮಾದರಿಯಲ್ಲಿ ಆಯೋಜಿಸಿ ಹೂವಿನ ಕಮಾನು ಹಾಕಿಸಿದ್ದರು, ಟ್ಯಾಬ್ಲಾಡಗಳ ಸಂಖ್ಯೆ ಹೆಚ್ಚಳ, ಹುಕ್ಕೇರಿ ಹಿರೇಮಠದ ಸಹಾಯದಿಂದ ರಾಜ್ಯೋತ್ಸವಕ್ಕೆ ಬರುವ ಜನತೆಗೆ ಹೋಳಿಗೆ ಊಟದ ಆಯೋಜನೆ ಮಾಡಿಸಿ; ಸ್ವತಃ ಮೆರವಣಿಗೆಯಲ್ಲಿ ಚಟುವಟಿಕೆಯಿಂದ ಓಡಾಡಿದ್ದರು.

ಅನ್ಯೋನ್ಯತೆ: ಜಿಲ್ಲೆಯ ಆಡಳಿತ ಮುಖ್ಯಸ್ಥರಾಗಿ, ರೇಂಜ್ ಐಜಿ, ಕಮಿಷ್ನರ್, ಎಸ್ಪಿ, ಡಿಸಿಎಫ್, ಬ್ರಿಗೇಡಿಯರ್, ಕಮೋಡರ್, ಕಮಾಂಡಂಟ್, ಸೇರಿದಂತೆ ಕೇಂದ್ರಿಯ ಸೈನ್ಯಪಡೆಗಳೊಂದಿಗೆ ಅನ್ಯೋನ್ಯತೆ ಸಾಧಿಸಿದ್ದರು. ಪ್ರಾದೇಶಿಕ ಆಯುಕ್ತರಾಗಿ ಏಳು ಜಿಲ್ಲೆಗಳಲ್ಲಿ ಸತತ ಓಡಾಟವೂ ಇರುತ್ತಿತ್ತು. ರಾಜಕೀಯ ಕುದುರೆ ಸವಾರಿ: 18 ಎಂಎಲ್ ಎ, ನಾಲ್ಕು ಎಂಪಿ, ಹಾಲಿ-ಮಾಜಿ ಸಚಿವರುಗಳು, ದೊಡ್ಡ ಜಿಪಂ., ಮಹಾನಗರ ಪಾಲಿಕೆ ಸೇರಿ ಇಡೀ ರಾಜಕೀಯವನ್ನೇ ನೊಣೆದು ಒಗ್ಗೂಡಿಸಿಕೊಂಡು ಆಡಳಿತ ನಡೆಸುವ ಪರಿಣಿತಿಯ ಹಿಂದೆ ಸಾಂದರ್ಭಿಕ ನಡೆ ನುಡಿ, ತೀಕ್ಷ್ಣ ಸ್ವರೂಪದ ನಿರ್ಧಾರಗಳೇ ಕಾರಣ. ಕರಾಳ ದಿನಾಚರಣೆ ಹೆಸರಲ್ಲಿ ಬೆಳಗಾವಿಗೆ ಆಗಮಿಸಲೆತ್ನಿಸಿದ ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವರಿಬ್ಬರಿಗೆ ತತಕ್ಷಣದಲ್ಲೇ ನಿಷೇಧ ನಿರ್ಧಾರ ಹೊರಡಿಸಿದ್ದರು. ನನ್ನ ಕಾರ್ಯಕ್ಷೇತ್ರ ಮಾತ್ರ ಬದಲಾಗಿದೆ: ಸೌಮ್ಯ, ಸಜ್ಜನ ಸಂಸ್ಕೃತಿಯ ತಂಪಾದ ಊರು ಬೆಳಗಾವಿ. ಇಲ್ಲಿ ರಾಜಕೀಯ ಕಾರಣಗಳಿಗೆ ಕೆಲವರು ತಂಟೆ ಎಬ್ಬಿಸುತ್ತಾರೆ ಹೊರತು. ಇಲ್ಲಿ ಗಡಿ, ಭಾಷಾ ಸಮಸ್ಯೆ ಇಲ್ಲವೇ ಇಲ್ಲ. ಗ್ರಾಮೀಣ ಮರಾಠಿಗರು ಮುಗ್ದತೆಯಿಂದ ನಮ್ಮೊಂದಿಗೆ ಸಮ್ಮಿಳಿತರಾಗಿದ್ದಾರೆ. ಕನ್ನಡಿಗ ಕನ್ನಡಪರ ಜಿಲ್ಲಾಧಿಕಾರಿಯನ್ನು ನೇಮಿಸುವ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನಾನು ಬೆಳಗಾವಿಯಲ್ಲಿದ್ದೇನೆ; ನನ್ನ ಕಾರ್ಯಕ್ಷೇತ್ರ ಮಾತ್ರ ಬದಲಾಗಿದೆ ಎಂದು ತಿಳಿಸಿದ್ದಾರೆ. ಮಾದರಿ ನಡೆ: ಹುದ್ದೆ ಪ್ರತಿಷ್ಠೆಯಾಚೆ ಸರಕಾರಿ ಸೇವೆಯನ್ನು, ಜನಸೇವೆಯಾಗಿ ಮಾರ್ಪಡಿಸಿಕೊಳ್ಳುವ ಗುಣಾಂಶಗಳನ್ನು ಇತರ ಅಧಿಕಾರಿಗಳಿಗೆ ಜಯರಾಮ ಮಾದರಿಯಾಗಿ ಬಿಟ್ಟು ನಡೆದಿದ್ದಾರೆ. ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಮೊದಲು ನಾಡಗೀತೆ ಹಾಡಿಸಿದ್ದ ಡಿಸಿ ವರ್ಗಾವಣೆ ಸುದ್ದಿ ಎಂಇಎಸ್ ಗೆ ನಿರಾಳವಾಗಿದ್ದು; ಕನ್ನಡಿಗರ ಕಳವಳ ಹೆಚ್ಚಿಸಿದೆ.