ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಶುಕ್ರವಾರ ಕೊನೆಯುಸಿರೆಳೆದ ಹಿರಿಯ ರಂಗನಟ, ನಾಡೋಜ ಡಾ.ಏಣಗಿ ಬಾಳಪ್ಪನವರ ಪಾರ್ಥಿವ ಶರೀರಕ್ಕೆ ಇಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅಂತಿಮ ನಮನ ಸಲ್ಲಿಸಿದರು. ಶಾಸಕ ಆನಂದ ಮಾಮನಿ, ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಎಸ್.ಪಿ. ಡಾ. ರವಿಕಾಂತೇಗೌಡ, ಧಾರವಾಡ ರಂಗಾಯಣ ನಿರ್ದೇಶಕ ಡಾ.ಪ್ರಕಾಶ ಗರುಡ, ಆಡಳಿತಾಧಿಕಾರಿ ಬಸವರಾಜ ಹೂಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿನಿರ್ದೇಶಕ ಕೆ.ಎಚ್.ಚನ್ನೂರ ಮತ್ತಿತರರು ಉಪಸ್ತಿತರಿದ್ದರು. ಬಾಳಪ್ಪ ಸ್ಮಾರಕ: ಏಣಗಿ ಬಾಳಪ್ಪನವರಿಗೆ ಅಂತಿಮ ನಮನ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಚಿವೆ ಉಮಾಶ್ರೀ, ಬಾಳಪ್ಪನವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವ ಕುರಿತು ಅವರ ಕುಟುಂಬದವರು, ಹಿತೈಷಿಗಳು, ಅಭಿಮಾನಿಗಳು ಹಾಗೂ ಕಲಾವಿದರ ಬಳಗದೊಂದಿಗೆ ಚರ್ಚಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು. ನುಡಿನಮನ: ಬಾಳಪ್ಪನವರ ನಿಧನದಿಂದ ನಾಡಿನ ಸಾಂಸ್ಕೃತಿಕ ಕೊಂಡಿ ಕಳಚಿದಂತಾಗಿದೆ. ಆದರೆ ರಂಗಭೂಮಿಯ ಬಹುದೊಡ್ಡ ಕಲಾವಿದರಾದ ಅವರು ಶತಾಯುಷಿಯಾಗಿ ನಮ್ಮೊಂದಿಗೆ ಇದ್ದಿದ್ದು ನಮ್ಮೆಲ್ಲರ ಭಾಗ್ಯ ಎಂದು ಸಚಿವೆ ಉಮಾಶ್ರೀ ಹೇಳಿದರು.
ಪತ್ನಿ ಸಮಾಧಿ ಬಳಿ ಲೀನ: ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮದ ಸಮೀಪದಲ್ಲಿ ಇರುವ ಜಮೀನಿನಲ್ಲಿ ನಾಡೋಜ ಏಣಗಿ ಬಾಳಪ್ಪನವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದ ಅನ್ವಯ ಅವರ ಪತ್ನಿಯ ಸಮಾಧಿ ಬಳಿಯೇ ನೆರವೇರಿತು. ಇದಕ್ಕೂ ಮುನ್ನ ಅವರ ನಿವಾಸದ ಆವರಣದಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ಸರಕಾರಿ ಗೌರವ ಸಲ್ಲಿಸಲಾಯಿತು. ಕುಟುಂಬದ ಸದಸ್ಯರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಸಂಸದ ಸುರೇಶ ಅಂಗಡಿ, ಬೈಲಹೊಂಗಲ ಶಾಸಕ ಡಾ. ವಿ.ಐ.ಪಾಟೀಲ, ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ರಂಗಭೂಮಿಯ ಕಲಾವಿದರು, ಬಾಳಪ್ಪನವರ ಅಭಿಮಾನಿಗಳು, ಬೆಳಗಾವಿ ಜಿಲ್ಲೆಯ ಅನೇಕ ಕಲಾವಿದರು, ಸಾಹಿತಿಗಳು, ಗಣ್ಯರು ಹಾಗೂ ಏಣಗಿ ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನರು ಬಾಳಪ್ಪನವರಿಗೆ ಅಂತಿಮ ವಿದಾಯ ಸಲ್ಲಿಸಿದರು.