SHARE

ಬೆಳಗಾವಿ: ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಉದ್ಧಟತನದ ನಡುವಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಾಮನೂರ ಶಿವಶಂಕರಪ್ಪ ಕೇವಲ ತಮ್ಮ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿಕೊಂಡಿದ್ದು ಬಿಟ್ಟರೆ ಸಮಾಜಕ್ಕೆ ಅವರಿಂದ ಯಾವ ಸಹಾಯ ಸಹಕಾರವೂ ಆಗಿಲ್ಲ.

ಲಿಂಗಾಯತರಿಗಾಗಲಿ, ವೀರಶೈವರಿಗಾಗಲಿ ಶಿವಶಂಕರಪ್ಪ ಅವರಿಂದ ಎಳ್ಳಷ್ಟು ಸಹಾಯ ಇಲ್ಲವೇ ಅನುಕೂಲ ಆಗಿಲ್ಲ ಎಂದರು. ಸಮಾಜಕ್ಕೆ ಏನೂ ಸಹಾಯ ಮಾಡಲಾಗದ ಶಾಮನೂರ ಈಗ ಸಚಿವ ಎಂ. ಬಿ. ಪಾಟೀಲ ಅವರನ್ನು ನೋಡಿಕೊಳ್ಳುತ್ತೇನೆ ಎನ್ನುವ ಬೆದರಿಕೆಗೆ ಯಾರೂ ಜಗ್ಗುವುದಿಲ್ಲ. ಸಚಿವ ಎಂ. ಬಿ. ಪಾಟೀಲ, ಸಚಿವ ವಿನಯ ಕುಲಕರ್ಣಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎಸ್. ಎಂ. ಜಾಮದಾರ ಅವರು ಸೇರಿದಂತೆ ಇತರ ಯಾರಿಗಾದರೂ ಕೂದಲು ಬರೀ ಸೋಕಿದ್ದಾದರೆ ನಾವೇನು ಇಲ್ಲಿ ಬಳೆ ಹಾಕಿಕೊಂಡು ಕುಳಿತಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಅವರಿಗೆ ಶಂಕರ ಮುನವಳ್ಳಿ ಮರು ಎಚ್ಚರಿಸಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಮನೂರ ಶಿವಶಂಕರಪ್ಪ ಅವರನ್ನು ತತಕ್ಷಣ ನಿಯಂತ್ರಣದಲ್ಲಿಟ್ಟುಕೊಳ್ಳಲಿ ಎಂದರು.

ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಮಹಾಸ್ವಾಮೀಜಿ ಮತ್ತಿತರರಿಗೆ ಕೂಡಲೇ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಮುನವಳ್ಳಿ ಒತ್ತಾಯಿಸಿದರು. ಸಮಾಜದ ದಿಟ್ಟ ಧ್ವನಿಯಾಗಿದ್ದ ಗೌರಿ ಲಂಕೇಶ ಹತ್ಯೆ ಅಮಾನವೀಯ ಮತ್ತು ವಿಚಾರವಂತರನ್ನು ಹತ್ತಿಕ್ಕುವ ಯತ್ನ. ಸರಕಾರ ಆದ್ಯತೆ ಮೇರೆಗೆ ತನಿಖೆ ಮಾಡಿ ಗೌರಿ ಹಂತಕರನ್ನು ಪತ್ತೆ ಹಚ್ಚಬೇಕು ಎಂದು ಮುನವಳ್ಳಿ ಸರಕಾರವನ್ನು ಒತ್ತಾಯಿಸಿದರು.