SHARE

ಬೆಳಗಾವಿ: ಇಂದು ದೇಶದಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರ 148ನೇ ಜನ್ಮದಿನಾಚರಣೆ ಬಹು ಸಂಭ್ರಮದಿಂದ ನಡೆದ ಮಧ್ಯೆ ಬೆಳಗಾವಿಯಲ್ಲಿ ಕಳೆಗುಂದಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಇಲ್ಲಿನ ಐತಿಹಾಸಿಕ ವೀರಸೌಧದ ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸದೇ ಕಳೆಗುಂದಲು ಕಾರಣಕರ್ತರಾದರು.

ಕಾಂಗ್ರೆಸ್ ಇತಿಹಾಸದಲ್ಲೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮೊದಲ ಬಾರಿಗೆ 1924ರಲ್ಲಿ ಕಾಂಗ್ರೆಸ್ ಅಧಿವೇಶನದ( Congress Session) ಅಧ್ಯಕ್ಷತೆ ವಹಿಸಿದ್ದ ಸ್ಥಳ ನಮ್ಮ ಬೆಳಗಾವಿ. ಆದ್ದರಿಂದ ಅಕ್ಟೋಬರ್ 2 ಎಂದರೆ ದೇಶದ ಗಮನವೆಲ್ಲ ಬೆಳಗಾವಿಯತ್ತ ಇರುತ್ತದೆ. ಆದರೆ ಇಲ್ಲಿನ ಜಿಲ್ಲಾಧಿಕಾರಿ ಮತ್ತು ಸಚಿವ ರಮೇಶ ಜಾರಕಿಹೊಳಿ ಕಾರ್ಯಕ್ರಮದಲ್ಲಿ ಚಟುವಟಿಕೆಯಿಂದ ಭಾಗವಹಿಸದೇ ಕಾರ್ಯಕ್ರಮ ವನ್ನೇ ಗೌನವಾಗಿಸಿದರು. ಕಾಂಗ್ರೆಸ್ ಬಾವಿ ಇರುವ ಇಲ್ಲಿನ ಕಾಂಗ್ರೆಸ್ ರಸ್ತೆಯ ಗಾಂಧೀ ಕಾಲಿಟ್ಟ ಸ್ಥಳವನ್ನು ಅಂದಿನ ಜಿಲ್ಲಾಧಿಕಾರಿ ಅತುಲ್ ಕುಮಾರ ತಿವಾರಿ ಬಹು ಆಸ್ಥೆಯಿಂದ ‘ವೀರಸೌಧ’ ಕಟ್ಟಿಸಿದ್ದಾರೆ. ಹಿಂದಿನ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಜಿಲ್ಲಾಧಿಕಾರಿ ಎನ್. ಜಯರಾಮ ಬಹು ಪ್ರೀತಿಯಿಂದ ಗಾಂಧಿ ಜಯಂತಿ ಸಂಘಟಿಸಿದ್ದು ಗಮನಾರ್ಹ. ಆದರೆ ಈ ಬಾರಿ ‘ಡಿಸಿ’ ಮತ್ತು ‘ಡಿಎಂ’ ಗೈರು ಹಾಜರಾಗಿ ಗಮನ ಸೆಳೆದರು.
ಜಿಲ್ಲಾಧಿಕಾರಿ ಜಿಯಾವುಲ್ಲಾ ಸಾಹೇಬರು ಎಲ್ಲಿ…!? ಎಂಬ ಪ್ರಶ್ನೆಗೆ ಬೆಂಗಳೂರಿನ ಮೀಟಿಂಗನತ್ತ ಎಂದು ಅಧಿಕೃತ ಉನ್ನತ ಮೂಲಗಳು ಸ್ಪಷ್ಠಪಡಿಸಿವೆ.

ಅತ್ತೆ ಸತ್ತರೆ ಅಮವಾಸ್ಯೆ ನಿಲ್ಲುವುದೇ.. ಎಂಬ ಗಾದೆಯಂತೆ ಇಬ್ಬರೂ ದಿವಾನರಿಲ್ಲದಿದ್ದರೇನಂತೆ ದೇಶದ ಮಹಾತ್ಮನ ಜಯಂತಿ ಆಚರಣೆ ನಿತ್ತಿತೇ…! ಚಡ್ಡಿದೋಸ್ತಿ ಶಾಲೆಯಿಂದ ಹಿಡಿದು, ವೃತ್ತಿಯಲ್ಲೂ ಒಂದೇ ರ್ಯಾಂಕನಲ್ಲಿ ಇರುವ ಮತ್ತು ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಸ್ಪರ ಆತ್ಮೀಯ ಗೆಳೆಯರಾದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮತ್ತು ಪಾಲಿಕೆ ಕಮಿಷ್ನರ್ ಶಶಿಧರ ಕುರೇರ ಗಾಂಧೀ ಜಯಂತಿ ಆಚರಣೆಗೆ ಕುಂದುಂಟಾಗದಂತೆ ಆಸ್ಥೆ ವಹಿಸಿದ್ದು ಗಮನ ಸೆಳೆಯಿತು.

ಎಡಿಸಿ ಡಾ. ಸುರೇಶ ಇಟ್ನಾಳ, ಮೇಯರ್ ಸಂಜೋತಾ ಬಾಂದೇಕರ ಮತ್ತು ಕಮಿಷ್ನರ್ ಶಶಿಧರ ಕುರೇರ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಕಾಂಟೊನ್ಮೆಂಟ್ ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಸದ ಸುರೇಶ ಅಂಗಡಿ ನಂತರ ವೀರಸೌಧದತ್ತ ತಲೆ ಹಾಕದೇ absent ಉಳಿದರು ಎಂದು ಮೂಲಗಳು ತಿಳಿಸಿದವು. ರಾಜಕೀಯ ಕಾರಣಗಳಿಗೆ ಇಲ್ಲಿಗೆ ಬರುವ ಕೆಲ ಅಧಿಕಾರಿಗಳು ತಮ್ಮ ಡ್ಯೂಟಿ ಮತ್ತು ಜನಸೇವೆಯತ್ತ ಅಷ್ಟೋಂದು ಗಮನಹರಿಸಲಾರರು ಎಂಬುವುದು ಸಹ ದಿಟ. ಬೆಳಗಾವಿಗೆ ಜನಸ್ನೇಹಿ, ಚಟುವಟಿಕೆಯಿಂದ ಇರುವ ದಿಟ್ಟ ಅಧಿಕಾರಿ ಬೆಳಗಾವಿಗೆ ಬೇಕು, ಎಂದು ನಗರದ ಕೆಲ ಹಿರಿಯರು ಪ್ರತಿಕ್ರಿಯಿಸಿದ್ದಾರೆ. ವಿಧಾನಸಭೆ ಎಲೆಕ್ಷನ್ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಚಟುವಟಿಕೆಯ ಡಿಸಿಯೊಬ್ಬರು ಬರುವ ಹಾದಿ ಕಾಯಬೇಕಿದೆ.