SHARE

ಬೆಳಗಾವಿ: ಸುಮಾರು ಅರ್ಧ ಶತಕದಿಂದ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದ ಜನರಿಗೆ ಖಾನಾಪುರ ಶಾಸಕಿ ಡಾ. ಅಂಜಲಿ ಹೇಮಂತ್ ನಿಂಬಾಳಕರ ಹಕ್ಕುಪತ್ರ ವಿತರಿಸಿದರು. ತಹಶೀಲ್ದಾರ ಕಚೇರಿ ಸಭಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಡಾ. ಅಂಜಲಿ ನಿಂಬಾಳಕರ ಕರ್ನಾಟಕ ಸರ್ಕಾರದ ಅಕ್ರಮ ಸಕ್ರಮ (94-ಸಿ) ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು.ಖಾನಾಪೂರ ತಾಲೂಕು ಲೋಂಡಾ, ನಾಗರಗಾಳಿ, ಚಿಗುಳೆ, ಜಾಂಬೋಟಿ, ಶಿಂಧೊಳ್ಳಿ, ಗಂದಿಗವಾಡ, ದೇವಲತ್ತಿ, ಕುಂಬರವಾಡಾ, ಹಲಶಿ ಮುಂತಾದ ಗ್ರಾಮಗಳ ಸುಮಾರು 2500 ಫಲಾನುಭವಿಗಳು ಸ್ವಂತ ನಿವೇಶನವಿಲ್ಲದ ಬಡಜನರು ಸರ್ಕಾರಿ ಭೂಮಿಯಲ್ಲಿ ಮನೆಕಟ್ಟಿಕೊಂಡು ಸುಮಾರು 40-50 ವರ್ಷಗಳಿಂದ ವಾಸಿಸುತ್ತಿದ್ದರು. ಈ ಕಟ್ಟಡಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲೆಗಳಿಲ್ಲದ್ದರಿಂದ ಅವರು ತೊಂದರೆಗೆ ಒಳಗಾಗಿದ್ದರು. ಪ್ರಮುಖವಾಗಿ ಗ್ರಾಮ ಪಂಚಾಯತಿಗಳಲ್ಲಿ ಇ-ಸ್ವತ್ತು ತಂತ್ರಾಂಶದಿಂದ ಇಂತಹ ಕಟ್ಟಡಗಳಿಗೆ ಉತಾರ ಮುಂತಾದ ಯಾವುದೇ ದಾಖಲೆಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಸದರಿ ಮನೆಗಳನ್ನು ದುರಸ್ಥಿಮಾಡಲು ಅಥವಾ ಶಿಥಿಲಗೊಂಡಾಗ ಪುನರ್ನಿರ್ಮಾಣ ಮಾಡಲು ಅನುಮತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.ಈ ಪರಿಸ್ಥಿತಿಯನ್ನು ಮನಗಂಡ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭೂಕಂದಾಯ ಕಾಯ್ದೆ-1964ರ ತಿದ್ದುಪಡಿ ಕಾಯ್ದೆ – 2013 ರಲ್ಲಿ ನಿಯಮ 94ಸಿ ಗೆ ತಿದ್ದುಪಡಿ ಮಾಡಿ ಸ್ವಂತ ನಿವೇಶನವಿಲ್ಲದೆ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದ ಬಡಜನರಿಗೆ ಗರಿಷ್ಠ 60’*40’=2400 ಚ.ಅಡಿ ವರೆಗೆ ಸದರಿ ಭೂಮಿಯ ಮೇಲೆ ಅವರ ಹಕ್ಕುಗಳನ್ನು ಮಾನ್ಯ ಮಾಡಲು ನಿರ್ಧರಿಸಿತು. ಅದರನ್ವಯ ಖಾನಾಪೂರ ತಾಲೂಕಿನಲ್ಲಿ ಕಂದಾಯ ಇಲಾಖೆಯು ಭೂಕಂದಾಯ ಕಾಯ್ದೆ 1964 ರ ನಿಯಮ 94ಸಿ ಅಡಿಯಲ್ಲಿ ತಾಲೂಕಿನಾದ್ಯಂತ ಅರ್ಜಿಗಳನ್ನು ಆಹ್ವಾನಿಸಿದ್ದರಿಂದ ತಾಲೂಕಿನಾದ್ಯಂತ ಸುಮಾರು 2252 ಅರ್ಜಿಗಳು ಸ್ವೀಕೃತವಾಗಿರುತ್ತವೆ. ಈ ಪೈಕಿ ಸಂಬಂಧಿಸಿದ ಗ್ರಾ.ಪಂ. ಪಿ.ಡಿ.ಓ. ರೊಂದಿಗೆ ಖಾನಾಪೂರ ತಹಶೀಲ್ದಾರರು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ 842 ಅರ್ಜಿಗಳನ್ನು ಮಾನ್ಯಮಾಡಿ ಮಾನ್ಯ ತಹಶೀಲ್ದಾರರು ಹಕ್ಕುಪತ್ರಗಳನ್ನು ಸಿದ್ದಪಡಿಸಿಲಾಗಿತ್ತು.ಇಂದು ಡಾ. ಅಂಜಲಿ ನಿಂಬಾಳಕರ ಲೋಂಡಾ, ನಾಗರಗಾಳಿ, ಚಿಗುಳೆ, ಜಾಂಬೋಟಿ, ಮುಂತಾದ ಗ್ರಾಮಗಳ 99 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ಭಾವನಾತ್ಮಕ ಸಂದರ್ಭದಲ್ಲಿ ಜನತೆ ಹಕ್ಕುಪತ್ರ ಪಡೆದರು. ತಹಶೀಲ್ದಾರ ಶಿವಾನಂದ ಉಳ್ಳಾಗಡ್ಡಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.