SHARE

ಬೆಳಗಾವಿ: ಸಂಪುಟದಿಂದ ಹೊರ ದಬ್ಬಿಸಿಕೊಂಡಿದ್ದ ಮಾಜಿ ಅರಣ್ಯ ಸಚಿವ ಹಾಗೂ ಪಕ್ಷೇತರ ಶಾಸಕ ಆರ್. ಶಂಕರ & ಶಾಸಕ ನಾಗೇಶ ಈಗ ಸಮ್ಮಿಶ್ರ ಸರಕಾರಕ್ಕೆ ‘ಸಂಕ್ರಮಣದ ಕರಿ’ ಆಘಾತ ನೀಡಿದ್ದಾರೆ. ರಾಜ್ಯ ಸಮ್ಮಿಶ್ರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಇಬ್ಬರೂ ಪಕ್ಷೇತರರು ಇಂದು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ್ದಾರೆ. ಸರ್ಕಾರದ ಇತ್ತೀಚೆಗಿನ ನಡವಳಿಕೆಯಿಂದ ಬೇಸತ್ತ ಈ ಇಬ್ಬರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನು ವಾಪಸ್ ಪಡೆಯುವುದಾಗಿ ರಾಜ್ಯಪಾಲ ವಜುಭಾಯ್​​​ ವಾಲಾ ಅವರಿಗೆ ಪತ್ರ ಬರೆದಿದ್ದಾರೆ.

ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರೋ ಆರ್​​. ಶಂಕರ್​, ಇಂದು ಮಕರ ಸಂಕ್ರಾಂತಿ, ಈ ದಿನ ನಾವು ಸರ್ಕಾರದಲ್ಲಿ ಬದಲಾವಣೆ ಬೇಕೆಂದು ಬಯಸಿದ್ದೇವೆ. ಸರ್ಕಾರ ಸಮರ್ಥವಾಗಿರಬೇಕು. ಹೀಗಾಗಿ ಇಂದು ನಾನು ನನ್ನ ಬೆಂಬಲ ವಾಪಸ್​ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಸಮ್ಮಿಶ್ರ ಸರ್ಕಾರ 120 ಶಾಸಕರ ಬಲಾಬಲ ಹೊಂದಿದೆ. ಇದರಲ್ಲಿ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿದ್ದು ಸರ್ಕಾರದ ಬಲಾಬಲ 118ಕ್ಕೆ ಇಳಿಕೆ ಆಗಿದೆ.