SHARE

ಬೆಳಗಾವಿ: ಜಿಲ್ಲೆಯ ಅದರಲ್ಲೂ ನೆರೆ ಹಾನಿಯಿಂದ ಸಂಪೂರ್ಣ ತತ್ತರಿಸಿರುವ ಗೋಕಾಕ ತಾಲೂಕಿಗೆ ಸಚಿವ ಲಕ್ಷ್ಮಣ ಸವದಿ ಭೇಟಿ ನೀಡಿದರು. ಅವರೊಂದಿಗೆ ವಿಪ ಸದಸ್ಯ ಮಹಾಂತೇಶ ಕವಟಗಿಮಠರು ನೆರೆ ಹಾವಳಿ ಪ್ರದೇಶಗಳನ್ನು ಪರಿಶೀಲಿಸಿದರು. ಅವರು ಮೊದಲು ಗೋಕಾಕ ನಗರದ ಕುಂಬಾರ ಓಣಿಗೆ ಭೇಟಿ ನೀಡಿ, ನೆರೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಾದ ಸತ್ಯವ್ವಾ ಕುಂಬಾರ, ಅಶೋಕ ಹಡಪದರ ಸಂಕಷ್ಟ ಆಲಿಸಿದರು. ನಂತರ ಪ್ರವಾಹ ಪೀಡಿತದಿಂದ ನಷ್ಟವಾದ ಗೋಕಾಕ ತಾಲೂಕಿನ ಎಲ್ಲ ಕುಟುಂಬಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪರಿಹಾರ ಒದಗಿಸಲು ಸೂಚಿಸಿದರು.

ಗೋಕಾಕ ತಾಲೂಕು ಪಂಚಾಯತಿಯಲ್ಲಿಯೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರವಾಹ ಪರಿಹಾರದ ಅಗತ್ಯ ತ್ವರಿತ ಕ್ರಮಗಳನ್ನು ನ್ಯಾಯಯುತವಾಗಿ ಕೈಗೊಳ್ಳಬೇಕೆಂದರು. ಭಾಗಶಃ ಭಾಗಗಳು ಮುಳುಗಡೆ ಯಾಗಿರುವದರಿಂದ ಮನೆಗಳಲ್ಲಿ ನೀರು ಸೇರಿರುವುದರಿಂದ ಅಲ್ಲಿ ಕ್ರಿಮಿಕೀಟಗಳು ಹೆಚ್ಚಾಗಿ ಬರುತ್ತವೆ ಅದಕ್ಕಾಗಿ ಜನರನ್ನು ಸಂರಕ್ಷಣೆ ನಿಡಲು ವೈದ್ಯಕೀಯ ಸೌಲಭ್ಯ ವ್ಯವಸ್ಥಿತವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜನರು ಬಹುಬೇಗನೆ‌ ತಮ್ಮ ಮನೆಗಳಿಗೆ ಹೋಗಿ ವಾಸ ಮಾಡುವಂತೆ ವ್ಯವಸ್ಥೆ ಆದಷ್ಟು ಬೇಗ ಮಾಡಬೇಕು ಅಲ್ಲಿ ನೀರು ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಆದಷ್ಟು ಬೇಗ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾಧಿಕಾರಿ ಡಾ. ಎಸ್. ಬಿ.ಬೊಮ್ಮನಹಳ್ಳಿ, ಜಿ.ಪಂ ಸಿಇಓ ಕೆ.ವಿ.ರಾಜೇಂದ್ರ ನೆರೆ ಹಾನಿಯ ವಿವರ ಒದಗಿಸಿದರು. ಮಧ್ಯಾಹ್ನ ರಾಮದುರ್ಗದತ್ತ ಪಯಣ ಬೆಳೆಸಿ ಅಲ್ಲಿನ ಪರಿಸ್ಥಿತಿ ಅವಲೋಕಿಸಲಿದ್ದಾರೆ.