SHARE

ಬೆಳಗಾವಿ: ನಗರದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಬಳಿಕ ನಗರ ಪೊಲೀಸರು ಎಚ್ಚೆತ್ತುಕೊಂಡಿದ್ದು ಮುಂಜಾನೆ 8 ಗಂಟೆಯಿಂದ 11 ಮಧ್ಯಾಹ್ನ 3 ಗಂಟೆಯಿಂದ 6 ಗಂಟೆವರೆಗೆ ಯಾವುದೇ ಭಾರಿ ವಾಹನಗಳು ಪ್ರವೇಶ ಮಾಡದಂತೆ ಕ್ರಮ ತೆಗೆದುಕೊಂಡಿದ್ದಾರೆ.ಹೌದು ಕ್ಯಾಂಪ್ ಮತ್ತು ಪೋರ್ಟ ರಸ್ತೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಭಾರಿ ವಾಹನಗಳಿಂದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರಿಂದ ಬೆಳಗಾವಿ ನಗರ ಪೊಲೀಸರ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ಗುರುವಾರ ತಮ್ಮ ಕಚೇರಿಯಲ್ಲಿ ಡಿಸಿಪಿ ಪಿ.ವ್ಹಿ.ಸ್ನೇಹಾ ಅವರು ಕ್ಯಾಂಪ್ ಪ್ರದೇಶದ ವಿದ್ಯಾರ್ಥಿಗಳ ಜೊತೆಗೆ ಪಾಲಕರ ಜೊತೆಗೆ ಸಭೆ ನಡೆಸಿದರು. ಇನ್ಮುಂದೆ ಈ ರೀತಿ ಘಟನೆ ಆಗದಂತೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪಾಲಕರಿಗೆ ಭರವಸೆ ನೀಡಿದರು. ಅಲ್ಲದೇ ದೊಡ್ಡ ದೊಡ್ಡ ವಾಹನಗಳು ಶಾಲೆ ಆರಂಭವಾಗುವ ಸಮಯ ಮತ್ತು ಶಾಲೆ ಬಿಡುವ ಸಮಯದಲ್ಲಿ ನಗರ ಪ್ರವೇಶ ಮಾಡದಂತೆ ಈ ವೇಳೆ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಈ ಸಂಬಂಧ ಮಾತನಾಡಿದ ಡಿಸಿಪಿ ಪಿ.ವ್ಹಿ.ಸ್ನೇಹಾ ನಿನ್ನೆ ಬೆಳಗಾವಿ ನಗರದಲ್ಲಿ ಮುಂಜಾನೆ 8 ಗಂಟೆಯಿಂದ 11 ಮಧ್ಯಾಹ್ನ3 ಗಂಟೆಯಿಂದ 6 ಗಂಟೆವರೆಗೆ ಯಾವುದೇ ಭಾರಿ ವಾಹನಗಳು ಪ್ರವೇಶ ಮಾಡದಂತೆ ಎಲ್ಲಾ ಕಡೆ ಪಾಯಿಂಟ್ ಹಾಕಿ ತಡೆಗಟ್ಟುತ್ತಿದ್ದೇವೆ. ಅದೇ ರೀತಿ ಸ್ಥಳದಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸುತ್ತಿದ್ದೇವೆ. ಎಲ್ಲಾ ಶಾಲೆಗಳಿಗೆ ಬಿಇಓಗಳ ಮೂಲಕ ಸೂಚನೆ ನೀಡುವಂತೆ ಮಾತನಾಡುತ್ತಿದ್ದೇವೆ. ಫಿಶ್ ಮಾರ್ಕೆಟ್ ಮತ್ತು ಕ್ಯಾಂಪ್ ಪ್ರದೇಶದಲ್ಲಿ ಸುಮಾರು 15-20 ಶಾಲೆಗಳಿವೆ. ಶಾಲೆ ವತಿಯಿಂದಲೂ ಜವಾಬ್ದಾರಿ ತೆಗೆದುಕೊಂಡು ಒಬ್ಬೊಬ್ಬರು ಗಾರ್ಡಗಳನ್ನು ನೇಮಿಸುವಂತೆ ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಾವು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಅದಕ್ಕೆ ನೀವು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.ನಂತರ ಐ.ಎಮ್.ಪಾಲೇಗಾರ ಮಾಧ್ಯಮ ಜೊತೆಗೆ ಮಾತನಾಡಿ ಕ್ಯಾಂಪ್ ಪ್ರದೇಶದ ವಿವಿಧ ಶಾಲೆಗಳಲ್ಲಿ ಸುಮಾರು 18 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅತೀ ವೇಗವಾಗಿ ವಾಹನಗಳು ಬರುತ್ತವೆ. ಇದರಿಂದ ಓರ್ವ ಅಮಾಯಕ ಬಾಲಕನನ್ನು ನಿನ್ನೆ ಕಳೆದುಕೊಂಡಿದ್ದೇವೆ. ಇದರಿಂದ ನಮಗೆ ಬಹಳಷ್ಟು ನೋವಾಗಿದೆ. ಸ್ಪೀಡ್ ಬ್ರೇಕರ್, ಸೂಚನಾ ಫಲಕಗಳನ್ನುಅಳವಡಿಸುವಂತೆ ತಿಳಿಸಿದ್ದೇವೆ. ಇನ್ಮುಂದೆ ಈ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ ಎಂದರು.ಈ ವೇಳೆ ರಿವಾನ್ ಬೇಪಾರಿ, ಸುನೀಲ್ ಜಾಧವ್, ಶಕೀಲ್ ಮುಲ್ಲಾ, ಸಂಗೊಳ್ಳಿ, ಕಿರಣ ನಿಪ್ಪಾಣಿಕರ್, ಅರುಣ ಗೋಜೆಪಾಟೀಲ್, ನದೀಮ್ ಫತೇಖಾನ್, ಇಮ್ರಾನ್ ಫತೇಖಾನ್ ಸೇರಿದಂತೆ ಇನ್ನಿತರ ಪಾಲಕರು ಉಪಸ್ಥಿತರಿದ್ದರು. ಒಟ್ಟಿನಲ್ಲಿ ಎರಡು ಜೀವಗಳು ಬಲಿಯಾದ ನಂತರ ಪೊಲೀಸರು ನಿದ್ದೆಯಿಂದ ಎದ್ದಿದ್ದು. ಭಾರಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ.